BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

ಕಾಂಗ್ರೆಸ್ ಅಸಮಾಧಾನ ಶಮನಕ್ಕೆ ಸುರ್ಜೇವಾಲ ಎಂಟ್ರಿ: ರಾಜೀನಾಮೆ ಹಿಂಪಡೆದ ಇಂಡಿ ಶಾಸಕ; ನಿರ್ಧಾರದಿಂದ ಹಿಂದೆ ಸರಿದ ಬೇಳೂರು!




ಬೆಂಗಳೂರು:

ಸಂಪುಟ ಪುನಾರಚನೆ ಬೆನ್ನಲ್ಲೇ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಶಾಸಕರ ಮುನಿಸು ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರ ಕಸರತ್ತು ನಡೆಸಿದೆ. ಸಿಎಂ ನೀಡಿದ ಭರವಸೆಯ ಬಳಿಕ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ವಾಪಸ್ ಪಡೆದಿದ್ದರೆ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಈ ನಡುವೆ, ಬೆಳೆಯುತ್ತಿರುವ ಅಸಮಾಧಾನಕ್ಕೆ ಬ್ರೇಕ್ ಹಾಕಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದು, 'ಡ್ಯಾಮೇಜ್ ಕಂಟ್ರೋಲ್' ಕಾರ್ಯಾಚರಣೆಗೆ ಇಳಿದಿದ್ದಾರೆ.

ಇಂಡಿ ಶಾಸಕ ಯಶವಂತರಾಯಗೌಡ ರಾಜೀನಾಮೆ ವಾಪಸ್:

ಸಚಿವ ಸ್ಥಾನ ಕೈತಪ್ಪಿದ್ದರಿಂದ ಬೇಸರಗೊಂಡು ಆ.3ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್, ಈಗ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

ಸಿಎಂ ಅವರೊಂದಿಗೆ ನಡೆದ ಮಾತುಕತೆಯ ನಂತರ ನಿರ್ಧಾರ ಬದಲಿಸಿರುವ ಅವರು, "ಕಾರಣಾಂತರಗಳಿಂದ ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯುತ್ತಿದ್ದೇನೆ" ಎಂದು ಬುಧವಾರ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಬೇಳೂರು ಮನವೊಲಿಸುವಲ್ಲಿ ಸಿಎಂ ಸಫಲ:

ಸಚಿವ ಸ್ಥಾನ ಸಿಗದಿದ್ದಕ್ಕೆ ರಾಜೀನಾಮೆ ಕೊಡುವುದಾಗಿ ಬಾಂಬ್ ಸಿಡಿಸಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಮನವೊಲಿಸುವಲ್ಲಿಯೂ ಸಿಎಂ ಯಶಸ್ವಿಯಾಗಿದ್ದಾರೆ. "ಸಚಿವ ಸ್ಥಾನ ಕೇಳಿದ್ದು ನಿಜ, ಸಿಎಂ ಜೊತೆ ಮಾತುಕತೆ ಬಳಿಕ ಅಸಮಾಧಾನ ಶಮನವಾಗಿದೆ. ರಾಜೀನಾಮೆ ನೀಡುವ ಆಲೋಚನೆ ಇಲ್ಲ" ಎಂದು ಬೇಳೂರು ಸ್ಪಷ್ಟಪಡಿಸಿದ್ದಾರೆ.

ವಾಲ್ಮೀಕಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ದದ್ದಲ್ ರಾಜೀನಾಮೆ:

ಇನ್ನೊಂದೆಡೆ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಿಎಂಗೆ ರವಾನಿಸಿದ್ದಾರೆ. ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದು, ಕೂಡಲೇ ಅಂಗೀಕರಿಸುವಂತೆ ಕೋರಿದ್ದಾರೆ.

ನಗರದಲ್ಲಿ ಸುರ್ಜೇವಾಲ ಬಿರುಸಿನ ಸಭೆ:

ಸಚಿವ ಸ್ಥಾನ ಸಿಗದೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದ ತನ್ವೀರ್ ಸೇಠ್, ಎಂ. ಕೃಷ್ಣಪ್ಪ, ನಾರಾಯಣಸ್ವಾಮಿ, ಸುಬ್ಬಾರೆಡ್ಡಿ ಸೇರಿದಂತೆ ಇತರ ಅಸಮಾಧಾನಿತ ಶಾಸಕರನ್ನು ನೇರವಾಗಿ ಭೇಟಿಯಾಗಿ ಸಮಾಧಾನಪಡಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸರಣಿ ಮಾತುಕತೆ ನಡೆಸುತ್ತಿದ್ದಾರೆ.

📢 ದ ಕರಾವಳಿ ಎಕ್ಸ್ ಪ್ರೆಸ್ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!