ಚಿಕ್ಕಮಗಳೂರು:
ಜಿಲ್ಲೆಯ ಕಾಫಿ ಎಸ್ಟೇಟ್‌ಗಳಲ್ಲಿ ಹೊರರಾಜ್ಯದ ಕಾರ್ಮಿಕರ ಪರಿಶೀಲನೆ ನಡೆಸುತ್ತಿದ್ದ ವೇಳೆ ಕೃತ್ಯ ಬೆಳಕಿಗೆ ಬಂದಿದ್ದು, ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿದ್ದ ಬರೋಬ್ಬರಿ ಐವರು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯಾಮ ಅವರು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ಟೇಟ್ ಒಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಐವರು ಶಂಕಿತರನ್ನು ಪತ್ತೆಹಚ್ಚಲಾಗಿದೆ.
ಬಂಧಿತರ ಗುರುತು & ಬಾಂಗ್ಲಾ ಗುರುತಿನ ಚೀಟಿ ಪತ್ತೆ:
ವಶಕ್ಕೆ ಪಡೆಯಲಾದವರನ್ನು ಜಹಾಂಗೀರ್, ಫೈಸುದ್ದಿನ್, ನುಮನ್ ಬಶೀರ್, ಮಹಮದ್ ಹುಮೈನ್ ಹಾಗೂ ಮಹಮದ್ ಹಸೀಬುಲ್ ಎಂದು ಗುರುತಿಸಲಾಗಿದೆ. ಪರಿಶೀಲನೆ ವೇಳೆ ಇವರ ಬಳಿ ಬಾಂಗ್ಲಾದೇಶದ ಅಧಿಕೃತ ಗುರುತಿನ ಚೀಟಿಗಳು ಲಭ್ಯವಾಗಿವೆ ಎಂದು ಎಸ್ಪಿ ತಿಳಿಸಿದ್ದಾರೆ.
ಎರಡು ತಿಂಗಳಿನಿಂದ ಚುರುಕುಗೊಂಡಿದ್ದ ಪರಿಶೀಲನೆ:
ಮಲೆನಾಡು ಭಾಗದ ಕಾಫಿ ತೋಟಗಳು, ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲಿ ನೆಲೆಸಿರುವ ವಿದೇಶಿ ಮತ್ತು ಹೊರರಾಜ್ಯದ ಕಾರ್ಮಿಕರ ಹಿನ್ನೆಲೆ ತಪಾಸಣೆಯನ್ನು ಪೊಲೀಸರು ಕಳೆದ ಎರಡು ತಿಂಗಳಿನಿಂದ ಚುರುಕುಗೊಳಿಸಿದ್ದರು. ಪ್ರತಿಯೊಬ್ಬ ಕಾರ್ಮಿಕನ ಹೆಸರು, ಭಾವಚಿತ್ರ ಹಾಗೂ ದಾಖಲೆಗಳನ್ನು ಕಲೆಹಾಕುವ ಪ್ರಕ್ರಿಯೆ ವೇಳೆ ಈ ಬಾಂಗ್ಲಾದೇಶಿಗರು ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಕೆಲವರು ಕುಟುಂಬ ಸಮೇತ ಎಸ್ಟೇಟ್‌ಗಳಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ.
ಏಜೆಂಟ್‌ಗಳ ಜಾಲದ ಬಗ್ಗೆ ತನಿಖೆ:
ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿ ಜಿಲ್ಲೆಗೆ ಬಂದಿರುವುದು ಹೇಗೆ? ಇವರನ್ನು ಕೆಲಸಕ್ಕೆ ಸೇರಿಸಿಕೊಂಡ ಕಾಂಟ್ರಾಕ್ಟರ್ ಯಾರು? ಹಾಗೂ ಇದರ ಹಿಂದೆ ಯಾವುದೇ ಅಕ್ರಮ ಏಜೆಂಟ್‌ಗಳ ಮಾನವ ಅಕ್ರಮ ಸಾಗಾಣಿಕೆ ಜಾಲವಿದೆಯೇ ಎಂಬುದರ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.