ಬೆಂಗಳೂರು:
ರಾಜ್ಯದಲ್ಲಿ ಜಾರಿಯಲ್ಲಿರುವ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ತಲುಪಿದ್ದು, ನಮೂನೆ ಅರ್ಜಿ ಪಡೆದವರು ಆಗಸ್ಟ್ 8ರ ಒಳಗಾಗಿ ತಮ್ಮ ಬೂತ್ ಮಟ್ಟದ ಏಜೆಂಟ್‌ಗಳಿಗೆ (BLA) ಸಲ್ಲಿಸಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯಾದ್ಯಂತ ನಡೆಸಲಾದ ಪರಿಶೀಲನೆಯಲ್ಲಿ ಬರೋಬ್ಬರಿ 1.11 ಕೋಟಿ ಅನುಮಾನಾಸ್ಪದ/ಸ್ಥಳಾಂತರಗೊಂಡ/ಮೃತ/ದ್ವಿಪ್ರತಿ (SDDO/ASDDO) ಮತದಾರರು ಪತ್ತೆಯಾಗಿದ್ದಾರೆ ಎಂದು ಬಹಿರಂಗಪಡಿಸಿದರು.
ಎಸ್‌ಡಿಡಿಒ ಮತದಾರರ ಪ್ರಮುಖ ಅಂಕಿ-ಅಂಶಗಳು:
ಒಟ್ಟು ಪರಿಶೀಲಿತ ಮತದಾರರು: 5,54,32,314
ಒಟ್ಟು ಎಸ್‌ಡಿಡಿಒ ಮತದಾರರು: 1,11,04,705
ಶಾಶ್ವತವಾಗಿ ಸ್ಥಳಾಂತರಗೊಂಡವರು: 66,64,943
ಮೃತಪಟ್ಟ ಮತದಾರರು: 16,30,872
ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವವರು: 6,89,904
ಸಹಿಗೆ ನಿರಾಕರಿಸಿದವರು: 4,88,974
ವಿಶೇಷವೆಂದರೆ, ಈ ಪತ್ತೆಯಾದ 1.11 ಕೋಟಿ ಎಸ್‌ಡಿಡಿಒ ಮತದಾರರ ಪೈಕಿ ಸುಮಾರು 49 ಲಕ್ಷ ಮತದಾರರು ರಾಜಧಾನಿ ಬೆಂಗಳೂರಿನವರೇ ಆಗಿದ್ದಾರೆ.
ಆಗಸ್ಟ್ 17ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ:
ಜೂನ್ 30ರಿಂದ ಆರಂಭವಾಗಿರುವ ಈ ಪ್ರಕ್ರಿಯೆಯ ಡಿಜಿಟಲೀಕರಣವು ಗುರುವಾರದ ವೇಳೆಗೆ ಶೇಕಡಾ 100ರಷ್ಟು ಪೂರ್ಣಗೊಳ್ಳಲಿದೆ. ಇನ್ನು 22,977 ಮತದಾರರು ಪಡೆದಿದ್ದ ಅರ್ಜಿಗಳನ್ನು ವಾಪಸ್ ನೀಡಿಲ್ಲ, ಅದನ್ನು ಆ.8ರೊಳಗೆ ನೀಡುವಂತೆ ಕೋರಲಾಗಿದೆ.
ಬರುವ ಆಗಸ್ಟ್ 17 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಒಂದು ವೇಳೆ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ, ಫಾರ್ಮ್-6 ರೊಂದಿಗೆ ಸೂಕ್ತ ದಾಖಲೆಗಳನ್ನು ನೀಡಿ ಅಂತಿಮ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಈಗಾಗಲೇ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಾಗಿ 12.20 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.